ಠೇವಣಿ
-	ಠೇವಣಿಯು ಪರಧನ. ಒಬ್ಬರು ಇನ್ನೊಬ್ಬರಲ್ಲಿ ಭದ್ರತೆಯ ದೃಷ್ಟಿಯಿಂದ ಇಟ್ಟಿರುವ ಹಣ. ಒಬ್ಬ ಇನ್ನೊಬ್ಬನಲ್ಲಿ ಭದ್ರ ಸುಪರ್ದಿಗೆಂದು ಇರಿಸಿದ ಹಣ ನಿಜ ಆದರೆ ಠೇವಣಿ ಇಡಬಸುವವನಿಗೆ ಠೇವಣಿ ಸ್ವೀಕರಿಸುವವನಲ್ಲಿ ಸಂಪೂರ್ಣ ನಂಬಿಕೆಯಿದ್ದಾಗ ಇದು ಸಾಧ್ಯವಾಗುತ್ತದೆ. ಒಬ್ಬರು ಅಥವಾ ಹೆಚ್ಚು, ಸಂಸ್ಥೆ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸುಪರ್ದಿಗೆ ಪೂರ್ಣ ನಂಬಿಕೆ, ವಿಶ್ವಾಸದಿಂದ, ಬೇಕಾದಾಗ ಹಿಂಪಡೆಯಲು, ನಿರ್ದಿಷ್ಟ ಅವಧಿಗೋ, ನಿಶ್ಚಿತ ಉದ್ದೇಶಕ್ಕೋ ಪರಸ್ಪರ ಒಪ್ಪಿದ ಬಡ್ಡಿದರಕ್ಕೆ, ಕೊಡುವ ಹಣವನ್ನು ಠೇವಣಿಯೆಂದು ವ್ಯಾಖ್ಯಾನಿಸಬಹುದು.

	ಪ್ರಾಚೀನ ಕಾಲದಲ್ಲಿ ಗ್ರೀಕ್, ರೋಮನ್ನರ ದೇವಾಲಯಗಳಲ್ಲಿ ಈ ಭದ್ರತೆ, ರಕ್ಷಣೆಗಳ ದೃಷ್ಟಿಯಿಂದ ಸಾರ್ವಜನಿಕರಿಂದ ಅಮೂಲ್ಯವಾದವುಗಳನ್ನು ಸ್ವೀಕರಿಸಿ ಅದಕ್ಕೆ ಶುಲ್ಕವನ್ನು ವಿಧಿಸುತ್ತಿದ್ದರು. ಅದೇ ರೀತಿ ಪಾಶ್ಚಾತ್ಯ ದೇಶಗಳಲ್ಲಿ ವಿಶೇಷವಾಗಿ ಇಂಗ್ಲೆಂಡ್ ಮೊದಲಾದ ಯುರೋಪಿನ ದೇಶಗಳಲ್ಲಿ ಮೊಟ್ಟ ಮೊದಲಿಗೆ ಬ್ಯಾಂಕುಗಳಂತೆ ವರ್ತಿಸುತ್ತಿದ್ದ ವಣಿಕರು ಸಾರ್ವಜನಿಕರಿಂದ ಭದ್ರತೆಯ ದೃಷ್ಟಿಯಿಂದ ಹಣ, ಒಡವೆ-ವಸ್ತುಗಳನ್ನು ಸ್ವೀಕರಿಸುತ್ತಿದ್ದರು. ಅದಕ್ಕಾಗಿ ಸೇವಾಶುಲ್ಕವನ್ನು ಪಾವತಿಸಬೇಕಾಗಿತ್ತು.  ಆದರೆ ಕ್ರಮೇಣ ಬ್ಯಾಂಕುಗಳು ಪ್ರಾರಂಭವಾದ ಮೇಲೆ ಈ ಪದ್ಧತಿಯು ಕ್ರಮೇಣ ಕರಗಿಹೋಯಿತು. 

	ಬ್ಯಾಂಕುಗಳು ಸಹಜವಾಗಿಯೇ ಸಾಮಾನ್ಯವಾಗಿ ನಂಬಿಕೆಗೆ ಅರ್ಹವಾದ ಸಂಸ್ಥೆಗಳಾಗಿರುತ್ತವೆ. ಆದ್ದರಿಂದ ಅವು ಪ್ರಮುಖ ಠೇವಣಿ ಸಂಗ್ರಾಹಕ ಸಂಸ್ಥೆಗಳು. ಬ್ಯಾಂಕಿಂಗಿನ ಇತಿಹಾಸದ ಆದಿಕಾಲದಲ್ಲಿ ಠೇವಣಿಯನ್ನು ಸ್ವೀಕರಿಸುತ್ತಿದ್ದ ಬ್ಯಾಂಕರನಿಗೆ ಆ ಮೊಬಲಗಿನ ಮೇಲೆ ಒಡೆತನ ಬರುತ್ತಿರಲಿಲ್ಲ. ಅದನ್ನು ಕಾಪಿಡುವುದಷ್ಟೆ ಅವನ ಕೆಲಸವಾಗಿತ್ತು. ಅವನು ಠೇವಣಿದಾರನಿಗೆ ಈ ಸೇವೆ ಸಲ್ಲಿಸುವ ಮುತಾಲಿಕ ಮಾತ್ರವೇ ಆಗಿದ್ದ. ಈ ಸೇವೆಗೆಂದು ಬ್ಯಾಂಕರನಿಗೆ ಠೇವಣಿದಾರ ಶುಲ್ಕ ಕೊಡಬೇಕಾಗಿತ್ತು. ಠೇವಣಿದಾರ ವೈಯಕ್ತಿಕವಾಗಿ ಬಂದು ಠೇವಣಿಯನ್ನು ಅಥವಾ ಅದರ ಒಂದು ಭಾಗವನ್ನು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದಾಗಿತ್ತು. ಠೇವಣಿಯನ್ನು ಇತರರಿಗೆ ಕೊಡುವಂತೆ ಬ್ಯಾಂಕರನಿಗೆ ಆದೇಶ ನೀಡುವ ರೂಢಿ ಕ್ರಮೇಣ ಬಂತು.

	ಠೇವಣಿ ಪಡೆದ ಬ್ಯಾಂಕರ್ಸ್ ಕ್ರಮೇಣ ಠೇವಣಿಯ ಮೊಬಲಗಿನ ಒಡೆಯನಾಗುವಂತಾಯಿತು ಅಂದರೆ, ಠೇವಣಿಯ ಮೊಬಲಗಿನ ಮೇಲೆ ವಿಲೇವಾರಿ ಅಧಿಕಾರ ಪಡೆದಂತಾಯಿತು. ಠೇವಣಿದಾರ ತನ್ನ ಠೇವಣಿಯ ಮರಪಾವತಿ ಕೇಳಿದಾಗ ಅಥವಾ ಠೇವಣಿಯ ಒಪ್ಪಂದದ ಪ್ರಕಾರ ಅದು ಮರುಪಾವತಿಯೋಗ್ಯವಾದಾಗ ಪಡೆದ ಎಲ್ಲ ಠೇವಣಿಗಳನ್ನೂ ಬ್ಯಾಂಕರ್ಸ್  ಮೊದಮೊದಲು ನಗದು ರೂಪದಲ್ಲೇ ತಿಜೋರಿಗಳಲ್ಲಿ ಭದ್ರಪಡಿಸುತ್ತಿದ್ದ. ಕ್ರಮೇಣ ಇದು ಅನಗತ್ಯವೆಂಬುದು ಅವನಿಗೆ ಮನವರಿಕೆಯಾಯಿತು. ತನ್ನ ಅನೇಕ ಠೇವಣಿದಾರರಲ್ಲಿ ಕೆಲವರಷ್ಟೇ ಠೇವಣಿಗಳ ಮರುಪಾವತಿಯನ್ನು-ಅದೂ ಭಾಗಶಃ ಮರುಪಾವತಿಯನ್ನು-ಕೇಳುತ್ತಾರೆಂಬುದು ಅವನ ಅನುಭವಕ್ಕೆ ಬಂತು. ಮೇಲಾಗಿ ನಿತ್ಯವೂ ಮರುಪಾವತಿಯಾಗುವಂತೆಯೇ ಹೊಸ ಠೇವಣಿಗಳೂ ಬರುತ್ತವೆಂಬ ಸಂಗತಿಯೂ ಅವನ ಅನುಭವಕ್ಕೆ ಬಂತು. ಆದ್ದರಿಂದ ಸೂಕ್ರವಾಗಿ ಅಂದಾಜು ಮಾಡಿದ ಮೊಬಲಗನ್ನು ಠೇವಣಿಗಳ ಮರುಪಾವತಿಗೆಂದು ಇಟ್ಟುಕೊಂಡು ಉಳಿದದ್ದನ್ನು ಲಾಭದಾಯಕವಾಗಿ ವಿನಿಯೋಜಿಸಲು ಅವನು ತೊಡಗಿದ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949ರ ಅಧಿನಿಯಮ 5 (ಬಿ)ಯ ಪ್ರಕಾರ ಬ್ಯಾಂಕಿಂಗ್‍ನ್ನು ಹೀಗೆ ವ್ಯಾಖ್ಯಾನಿಸಲಾಗಿದೆ, ``ಬ್ಯಾಂಕಿಂಗ್ ಎಂದರೆ ಸಾಲ-ಮುಂಗಡ ಅಥವಾ ಹೂಡಿಕೆಗಳಲ್ಲಿ ತೊಡಗಿಸಲೆಂದು ಠೇವಣಿಯನ್ನು ಸ್ವೀಕರಿಸಿ ಹಿಂಪಡೆಯಲು ಬೇಡಿಕೆ ಬಂದಾಗ ಸೂಕ್ತ ರೂಪ/ರೀತಿಯಲ್ಲಿ ಹಣವನ್ನು ಹಿಂದಿರುಗಿಸುವುದು.''

	ಠೇವಣಿಗಳ ಮರುಪಾವತಿ ಕೇಳುವವರು ನಗದುರೂಪದಲ್ಲೇ ಮೊಬಲಗನ್ನು ಪಡೆಯಬೇಕೆಂದು ಬಯಸುವುದಿಲ್ಲವೆನ್ನುವಂತಿಲ್ಲ. ಆದರೆ ನಗದು ರೂಪದಲ್ಲೇ ಕೊಡಲು ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ರೂ.20,000/-ಕ್ಕೆ ಮೀರಿದ ಯಾವುದೇ ಠೇವಣಿಯಾಗಲಿ ಅಥವಾ ಸಾಲದ ಹಣವಾಗಲಿ ನೇರವಾಗಿ ನಗದು ಪಾವತಿ ಮಾಡುವಂತಿಲ್ಲ.  ಎಲ್ಲ ಗ್ರಾಹಕರು ಠೇವಣಿಯನ್ನು ನಗದಾಗಿ ಕೇಳುವುದಿಲ್ಲ. ಯಾಕೆಂದರೆ,  ಅಗತ್ಯವಾದ ಪಾವತಿಗಳನ್ನು ಮಾಡಲು ನೆರವಾಗುವ ವ್ಯವಸ್ಥೆ ಅವರಿಗೆ ಸಾಕು. ಇದನ್ನು ಚೆಕ್ಕುಗಳು ಒದಗಿಸಿಕೊಟ್ಟುವು. ಅವರಿಂದ ಚೆಕ್ ಪಡೆದವರೆಲ್ಲರೂ ಬ್ಯಾಂಕಿನಿಂದ ನಗದನ್ನು ಪಡೆಯಲು ಬಯಸುವುದೂ ಇಲ್ಲ. ಅವರು ಚೆಕ್ಕಿನ ಮೊಬಲಗನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಅಥವಾ ತಾವು ಮಾಡಬೇಕಾದ ಪಾವತಿಗಳನ್ನು ಮಾಡಲು ಬಳಸುವರೆಂಬುದು ಬ್ಯಾಂಕರನ ಅನುಭವ. 

	ಇದೇ ರೀತಿ ಬ್ಯಾಂಕರ್ಸ್  ಸಾಲ ನೀಡಿದಾಗಲೂ ಸಾಲದ ಮೊಬಲಗನ್ನು ನಗದು ರೂಪದಲ್ಲಿ ಪಾವತಿ ಮಾಡದೆ ಸಾಲ ಪಡೆದವನ ಹೆಸರಿನಲ್ಲಿ ಒಂದು ಠೇವಣಿಯನ್ನು ಸೃಷ್ಟಿಸಿಕೊಡಲಾರಂಭಿಸಿದ. ಸಾಲ ಪಡೆದವನು ಈ ಠೇವಣಿಯ ಶಿಲ್ಕಿನ ಮೇಲೆ ಚೆಕ್ಕುಗಳನ್ನು ಬರೆಯುವ ಹಕ್ಕನ್ನು ಪಡೆಯುತ್ತಿದ್ದ. ನಗದು ಪಾವತಿ ಮಾಡದೆಯೇ ಸಾಲ ಕೊಡುವುದೂ ನಗದು ಸ್ವೀಕರಿಸದೆಯೇ ಠೇವಣಿಯನ್ನು ಸೃಷ್ಟಿಸುವುದೂ ಬ್ಯಾಂಕರನಿಗೆ ಸಾಧ್ಯವಾಯಿತು. ನಗದು ಇಲ್ಲವೆ ಚೆಕ್ ಸ್ವೀಕರಿಸಿ ಬ್ಯಾಂಕರ್ಸ್  ಸೃಷ್ಟಿಸಿದ್ದು ಪ್ರಾಥಮಿಕ ಠೇವಣಿ. ಇದಿಲ್ಲದೆ ಸೃಷ್ಟಿಸಲಾದ್ದು ಉತ್ಪನ್ನ ಠೇವಣಿ.

	ಬ್ಯಾಂಕಿನ ಕಾರ್ಯಕಾರಿ ಬಂಡವಾಳದಲ್ಲಿ ಅದರ ಷೇರು ಬಂಡವಾಳವೂ ವಿತರಣೆಯಾಗದಿರುವ ಲಾಭವೂ (ಮೀಸಲುಗಳು) ಸೇರಿರುತ್ತವೆ. ಇವು ಬ್ಯಾಂಕಿನ ಸ್ವಂತ ಸಂಪನ್ಮೂಲಗಳು. ಇಷ್ಟನ್ನೇ ಬಳಸಿ ಬ್ಯಾಂಕುಗಳು ಲಾಭಗಳಿಸುವುದು ಅಸಾಧ್ಯಗೊಳಿಸಿದರೂ ಅದು ಬಲು ಸೀಮಿತವಾಗಿತ್ತದೆ. ಆದ್ದರಿಂದ ಬಯಾಂಕುಗಳು ಇತರರಿಂದ ಸಾಲ ತೆಗೆದು ಅದನ್ನೂ ತನ್ನ ವ್ಯವಹಾರಕ್ಕೆ ಬಳಸಬೇಕಾಗುತಗ್ತದೆ. ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸುವುದು ಸಾಲ ತೆಗೆಯುವ ವಿಧಾನಗಳಲ್ಲಿ ಅತಿ ಮುಖ್ಯವೂ ಅತ ಅಗ್ಗವೂ ಆದ ವಿಧಾನ. ಆದ್ದರಿಂದಲೇ ಒಂದು ಬ್ಯಾಂಕಿನ ಕಾರ್ಯಕಾರಿ ಬಂಡವಾಳದಲ್ಲಿ ಬಹುಪಾಲು ಅದು ಸ್ವೀಕರಿಸಿದ ಠೇವಣಿಗಳ ಮೊಬಲಗೇ  ಆಗಿರುತ್ತದೆ. ಬಯಾಂಕು ತುಂಬ ಕಾಳಜಿಯಿಂದ ಠೇವಣಿಗಳನ್ನು ನೀಡುವುದುಂಟು. ಠೇವಣಿಗಳನ್ನು ಪಡೆಯಲು ಅದು ಅನೇಕ ಆಕರ್ಷಣೆಗಳನ್ನು ನೀಡುವುದುಂಟು. ಅದು ತನ್ನ ಠೇವಣಿಗಳ ಮೇಲೆ ನೀಡುವ ಬಡ್ಡಿಗೂ ತಾನು ನೀಡುವ ಸಾಲಮುಂಗಡಗಳ ಮೇಲೆ ವಸೂಲ ಮಾಡುವ ಬಡ್ಡಿಗೂ ಇರುವ ಅಂತರವೇ ಬ್ಯಾಂಕಿನ ಲಾಭದ ಮೂಲ.

	ಬ್ಯಾಂಕುಗಳು ಠೇವಣಿಗಳನ್ನು ನವೀಕರಿಸುವದರಿಂದ ಸಾರ್ವಜನಿಕರಲ್ಲಿ ಚಲಾವಣೆಯಾಗುತ್ತಿರುವ ಹಣದ ಅನಗತ್ಯ ಭಾಗವನ್ನು ಆಕರ್ಷಿಸಿ ತನ್ಮೂಲಕ ಹಣದುಬ್ಬರವನ್ನು ತಡೆಯುವಲ್ಲಿ ನೆರವು ದೊರೆಯುತ್ತದೆ.

	ಠೇವಣಿಯಿಂದ ಠೇವಣಿದಾರ ಮತ್ತು ಬ್ಯಾಂಕರನ ನಡುವೆ ಸಾಲದಾತ ಮತ್ತು ಸಾಲಗಾರನ ಸಂಬಂಧ ಏರ್ಪಡುತ್ತದೆ. ಆದರೆ ಈ ಸಂಬಂಧ ವಿಶಿಷ್ಟವಾದ್ದು. ಠೇವಣಿದಾರ ಕೇಳುವವರೆಗೂ ಬ್ಯಾಂಕರನು ಪಾವತಿ ಮಾಡಬೇಕಾಗಿರುವುದಿಲ್ಲ. ಆದ್ದರಿಂದ ಠೇವಣಿಯ ಮರುಪಾವತಿಯನ್ನು ಕೇಳಿದ ಹೊರತು ಸಾಲಕ್ಕೆ ಕಾಲಪರಿಮಿತಿ ಆರಂಭವಾಗುವುದಿಲ್ಲ. ಠೇವಣಿಯ ಮರುಪಾವತಿಯನ್ನು ಕೇಳಿದಾಗ ಅಥವಾ ಠೇವಣಿ ಪಾವತಿ ಯೋಗ್ಯವಾದಾಗ ಬ್ಯಾಂಕರ್ಸ್  ಮರುಪಾವತಿಗೆ ಬಾಧ್ಯನಾಗುತ್ತಾನೆ.

	ಠೇವಣಿಗಳಲ್ಲಿ ಸ್ಥೂಲವಾಗಿ ಎರಡು ಬಗೆಗಳುಂಟು; ಸಾವಧಿ(ನಿಶ್ಚಿತಾವಧಿ) ಠೇವಣಿ ಮತ್ತು ಬೇಡಿಕೆ (ಅನಿಶ್ಚಿತಾವಧಿ) ಠೇವಣಿ. ಹಣವನ್ನು ಹೀಗೆ ಇಡುಗಂಟಾಗಿಯೋ ಅಥವಾ ಚಿಲ್ಲರೆ-ಚಿಲ್ಲರೆಯಾಗಿಯೋ ಒಂದೆಡೆಯಲ್ಲಿ/ಹಲವೆಡೆಯಲ್ಲಿ ಇಡುವವನಿಗೆ ಠೇವಣಿದಾರನೆನ್ನುತ್ತಾರೆ. ಸಾವಧಿ ಠೇವಣಿಯನ್ನು ಅವಧಿ ಪೂರೈಸಿದ ಅನಂತರ ಹಿಂದಿರುಗಿಸಬೇಕಾಗುತ್ತದೆ. ಬೇಡಿಕೆ ಠೇವಣಿಯನ್ನು ಠೇವಣಿದಾರ ಬಯಸಿದಾಗ ಹಿಂದಿರುಗಿಸಬೇಕಾಗುತ್ತದೆ. ಪ್ರತಿಯೊಂದು ಸಾವಧಿ ಠೇವಣಿ ಖಾತೆಯು ಭಾರತೀಯ ಗುತ್ತಿಗೆ ವ್ಯವಹಾರ ಕಾಯಿದೆ (ಇಂಡಿಯನ್ ಕಾಂಟ್ರ್ಯಾಕ್ಟ್ ಆಕ್ಟ್, 1872)ಯ ಅಧಿನಿಯಮ 2(ಜಿ) ಮತ್ತು 2(ಈ)ಯ ಅನ್ವಯ ಕಾನೂನಿನಿಂದ ನಿರ್ಬಂಧಿತವಾಗಿರುತ್ತವೆ. ಅದುದರಿಂದ ಪ್ರತಿಯೊಂದು ಠೇವಣಿ ಖಾತೆಯು ಒಂದೊಂದು  ಪ್ರತ್ಯೇಕ ಕರಾರಿನಂತೆ ವ್ಯವಹರಿಸಬೇಕಾಗುತ್ತದೆ.  ಬೇಡಿಕೆ ಠೇವಣಿಗಳ ಮರುಪಾವತಿಗೆ ಬ್ಯಾಂಕರ್ಸ್  ಹೆಚ್ಚಿನ ನಗದನ್ನು ಇಟ್ಟುಕೊಂಡಿರಬೇಕಾಗುತ್ತದೆ. ಹೀಗೆ ಇಟ್ಟುಕೊಂಡ ನಗದು ಆದಾಯವನ್ನು ಗಳಿಸುವುದಿಲ್ಲ. ಬ್ಯಾಂಕರ್ಸ್  ಈ ಕೊರೆಯನ್ನು ತುಂಬಿಸಿಕೊಳ್ಳಲು ಠೇವಣಿದಾರನಿಗೆ ಹೆಚ್ಚಿನ ಕನಿಷ್ಠ ಶಿಲ್ಕು ಉಳಿಸಲು ವಿಧಿಸುತ್ತಾನೆ. ಬೇಡಿಕೆ ಠೇವಣಿಯ ಮೇಲೆ ಬಡ್ಡಿಯನ್ನು ನೀಡುವುದಿಲ್ಲ. ಇಲ್ಲವೇ ತೀರ ಕಡಿಮೆ ದರದ ಬಡ್ಡಿ ನೀಡುತ್ತಾನೆ. ಮೇಲಾಗಿ ತನ್ನ ವ್ಯವಹಾರಾನುಭವದಿಂದ ಅವನಿಗೆ ಪ್ರತಿದಿನ ಠೇವಣಿಗಳ ಮರುಪಾವತಿಗೆ ಬೇಕಾಗುವ ಮೊಬಲಗು ಎಷ್ಟೆಂಬುದು ಅಂದಾಜಾಗುತ್ತದೆ. ಇಷ್ಟು ಮೊಬಲಗನ್ನು ನಗದಾಗಿ ಇಟ್ಟುಕೊಂಡು ಉಳಿದದ್ದನ್ನು ಬ್ಯಾಂಕರ್ಸ್  ಲಾಭಗಳಿಸಲು ನಿಶ್ಚಿಂತೆಯಿಂದ ವಿನಿಯೋಗಿಸಬಹುದು. ಸಾವಧಿ ಠೇವಣಿಗಳ ಬಗ್ಗೆ ಬ್ಯಾಂಕರನ ಸ್ಥಾನ ಬಲು ಭದ್ರವಾದ್ದು. ಠೇವಣಿಗಳ ಮರುಪಾವತಿ ದಿನಗಳು ಅವನಿಗೆ ತಿಳಿದಿರುತ್ತವೆ. ಅವಕ್ಕೆ ಅನುಗುಣವಾಗಿ ಅವನು ತನ್ನ ಹೂಡಿಕೆಗಳನ್ನು ಯೋಜಿಸಿಕೊಳ್ಳಬಹುದು. ಠೇವಣಿದರನು ಅವಧಿಗೆ ಮುಂಚೆ ಠೇವಣಿಯನ್ನು ಹಿಂದಕ್ಕೆ ಪಡೆಯಲು ಸಂಪೂರ್ಣ ಅಧಿಕಾರವಿರುತ್ತದೆ. ಆದರೆ ಅದಕ್ಕಾಗಿ ಅವನು ಸ್ವಲ್ಪ ದಂಡ ತೆರಬೇಕಾಗುತ್ತದೆ. ಅಂದರೆ ಅವನಿಗೆ ಬಡ್ಡಿ ಹಣದಲ್ಲಿ ಕಡಿತವಾಗುತ್ತದೆ. ಈ ಕಾರಣಗಳಿಗಾಗಿ ಸಾವಧಿ ಠೇವಣಿಗಳಿಗೆ ಬ್ಯಾಂಕರ್ಸ್  ಹೆಚ್ಚಿನ ದರದ ಬಡ್ಡಿ ಕೊಡುತ್ತಾನೆ.

	ಸಾವಧಿ ಠೇವಣಿ: ಸಾವಧಿ ಠೇವಣಿಗಳಲ್ಲಿ ಮುಖ್ಯ ಬಗೆಗಳು ಇವು: 1. ನಿಶ್ಚಿತಾವಧಿ ಠೇವಣಿ, 2. ನಗದು ದೃಢೀಕರಣಪತ್ರ 3. ಮಾಸಿಕ ಠೇವಣಿ, 4. ಪಿಗ್ಮಿ ಠೇವಣಿ. ಈ ಎಲ್ಲ ಠೇವಣಿಗಳಲ್ಲೂ ಇರುವ ಸಾಮಾನ್ಯ ಅಂಶವೆಂದರೆ, ಠೇವಣಿಯನ್ನು ಕೇಳಿದಾಗ ಹಿಂದಿರುಗಿಸಬೇಕಾಗಿಲ್ಲ. ನಿಗದಿಯಾದ ಅವಧಿಯ ಅನಂತರ ಅಥವಾ ಸೂಕ್ರ ಸೂಚನೆ ಕೊಟ್ಟ ಅನಂತರ ಮರುಪಾವತಿ ಪಡೆಯಬಹುದಾಗಿದೆ.

	ನಿಶ್ಚಿತಾವಧಿ ಠೇವಣಿ: ಇದನ್ನು ಸಾಮಾನ್ಯವಾಗಿ 14 ದಿನಗಳಿಂದÀ 10 ವರ್ಷಗಳ ವರೆಗಿನ ಅವಧಿಗಳಿಗೆ ಸ್ವೀಕರಿಸಲಾಗುತ್ತದೆ. ಯಾವ ಅವಧಿಯನ್ನೂ ನಿಗದಿ ಪಡಿಸದೆ ಒಂದು ಗೊತ್ತಾದ ಅವಧಿಯ ತಿಳಿವಳಿಕೆ ಕೊಟ್ಟು ಹಿಂದಕ್ಕೆ ಪಡೆಯಬಹುದಾದ ಠೇವಣಿಗಳು ಇಲ್ಲ. 

	ಅವಧಿ ತೀರುವ ಮುನ್ನ ನಿಶ್ಚಿತಾವಧಿ ಠೇವಣಿಯನ್ನು ಹಿಂದಿರುಗಿಸಲು ಬ್ಯಾಂಕರ್ಸ್  ಬಾಧ್ಯನಲ್ಲ. ಅಂತೆಯೇ ಠೇವಣಿದಾರನ ಸಮ್ಮತಿಯಿಲ್ಲದೆ ಠೇವಣಿಯನ್ನು ಹಿಂದಿರುಗಿಸಲೂ ಸಾಧ್ಯವಿಲ್ಲ. ಆದರೆ ಬ್ಯಾಂಕರ್ಸ್  ಕೆಲವು ವೇಳೆ ಠೇವಣಿದಾರನಿಗೆ ಠೇವಣಿಯನ್ನು ಹಿಂದಕ್ಕೆ ಪಡೆಯಲು ಅವಕಾಶ ಕೊಡಬಹುದು. ಆಗ ಠೇವಣಿಯ ಮೇಲಿನ ಪೂರ್ತಿ ಅಥವಾ ಭಾಗಶಃ  ಬಡ್ಡಿಯನ್ನು ಠೇವಣಿದಾರ ಕಳೆದುಕೊಳ್ಳಬೇಕಾಗುತ್ತದೆ. ಈ ವಿಧಾನಕ್ಕಿಂತಲೂ ಬ್ಯಾಂಕರ್ಸ್  ಠೇವಣಿದಾರನಿಗೆ ಠೇವಣಿ ರಸೀತಿಯ ಆಧಾರದ ಮೇಲೆ ಸಾಲ ಕೊಡುವುದೇ ಸಾಮಾನ್ಯ. ಕೂಡು ಬಂಡವಾಳ ಕಂಪನಿಗಳು (ಜಾಯಿಂಟ್ ಸ್ಟಾಕ್ ಕಂಪನಿ) ಕೆಲವು ಮಿತಿಗಳಿಗೆ ಒಳಪಟ್ಟು ಸಾರ್ವಜನಿಕರಿಂದ ನಿಶ್ಚಿತಾವಧಿ ಠೇವಣಿಗಳನ್ನು ಸ್ವೀಕರಿಸುತ್ತವೆ.

	ನಗದು ಪತ್ರಗಳು: ಬ್ಯಾಂಕುಗಳು ನಗದು ಪತ್ರಗಳನ್ನು ನೀಡಿ ಠೇವಣಿಗಳನು ಸಂಗ್ರಹಿಸುತ್ತವೆ. ನಗದು ಪತ್ರಗಳನ್ನು ಸಾಮಾನ್ಯವಾಗಿ 100, 500, 1000, 5000 ರೂಪಾಯಿಗಳಲ್ಲಿ ಅಥವಾ ಅವುಗಳ ಅಪವತ್ರ್ಯಗಳಲ್ಲಿ ನೀಡಲಾಗುವುದು. ನಗದು ಪತ್ರಗಳ ಅವಧಿ 3ರಿಂದ 7 ವರ್ಷಗಳವರೆಗೆ ಇರುತ್ತದೆ. ಇವುಗಳ ನೀಡಿಕೆಯ ಬೆಲೆ ಮುಖಬೆಲೆಗಿಂತ ಕಡಿಮೆಯದಿರುತ್ತದೆ. ಅವಧಿ ಮುಗಿದು ಪಾವತಿಯ  ದಿನದಂದು ಬ್ಯಾಂಕು ನಗದು ಪತ್ರದ ಮುಖಬೆಲೆಯನ್ನು ಪಾವತಿ ಮಾಡುತ್ತದೆ. ವಾಯಿದೆ ತೀರಿದೊಡನೆಯೇ ಈ ಠೇವಣಿ ಬೇಡಿಕೆ ಠೇವಣಿಯಾಗುತ್ತದೆ.

	ನಗದು ದೃಢೀಕರಣಪತ್ರವನ್ನು ವರ್ಗಾಯಿಸುವಂತಿಲ್ಲ. ಅದನ್ನು ಪಾವತಿಯ ದಿನಾಂಕಕ್ಕೆ ಮೊದಲೆ ನಗದಿಗೆ ಪರಿವರ್ತಿಸಿಕೊಳ್ಳಬಹುದು. ಆದರೆ ಸೂಕ್ತವಾಗಿ ಬಡ್ಡಿಯ ಮೊಬಲಗನ್ನು ಕಳೆದುಕೊಂಡು ಬ್ಯಾಂಕು ಪಾವತಿಮಾಡುತ್ತದೆ. ನಗದು ದೃಢೀಕರಣಪತ್ರಗಳ ಆಧಾರದ ಮೇಲೆ ಬ್ಯಾಂಕು ಸಾಲ ಕೊಡುವುದೂ ರೂಢಿಯಲ್ಲಿದೆ.  ಬಾಂಕುಗಳು, ಹಣಕಾಸು ಸಂಸ್ಥೆಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು, ಸೊಸೈಟಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಲವಾರು ವಿವಿಧ-ವಿಭಿನ್ನ ಠೇವಣಿ ಯೋಜನೆಗಳನ್ನು ರೂಪಿಸಿ, ವಿನ್ಯಾಸ ಮಾಡಿ ಅನೇಕ ರಿಯಾಯತಿ, ಸೌಲಭ್ಯಗಳ ಅಕರ್ಷಣೆಯಿಟ್ಟು ಠೇವಣಿದಾರರನ್ನು ಆಕರ್ಷಿಸುತ್ತವೆ. ಇವೆಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ತಮ್ಮದೇ ಆದ ಆಂತರಿಕ ಹಾಗೂ ಗ್ರಾಹಕ ಸಂಬಂಧಿತ ನಿಯಮಾವಳಿಗಳನ್ನು ರೂಪಿಸಿಕೊಂಡಿರುತ್ತವೆ. ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ತಮ್ಮಲ್ಲಿನ ಸಾರ್ವಜನಿಕ ಠೇವಣಿಗಳಿಗೆ ವಿಮೆ ಮಾಡಿಸಿರುತ್ತವೆ. ಸರ್ಕಾರಿ ಸ್ವಾಮ್ಯದ ಠೇವಣಿ ವಿಮಾ ನಿಗಮದಲ್ಲಿ ತಮ್ಮ ಎಲ್ಲಾ ಠೇವಣಿಯನ್ನು ವಿಮೆಮಾಡಿಸಿ ವಾರ್ಷಿಕವಾಗಿ ವಿಮಾಶುಲ್ಕವನ್ನು ಪಾವತಿಮಾಡುತ್ತಿರುತ್ತವೆ. ಇದು ಈಗೀಗ ಶಿಥಿಲವಾಗುತ್ತಿದೆಯಾದರು ಸಾಕಷ್ಟು ಪ್ರಚಲಿತದಲ್ಲಿದೆ. ಇದರಿಂದಾಗಿ ಬ್ಯಾಂಕು ಅಕಸ್ಮಾತ್ ಕುಸಿದು ಠೇವಣಿಯನ್ನು ಪಾವತಿಮಾಡಲು ಅಸಮರ್ಥವಾದಲ್ಲಿ ಈ ವಿಮಾ ನಿಗಮವು ಒಬ್ಬ ವ್ಯಕ್ತಿಗೆ ಒಂದು ಲಕ್ಷ ರೂ. ಮೀರದಂತೆ ವಿಮೆ ಹಣ ಪಾವತಿ ಮಾಡುತ್ತದೆ. ಇದಕ್ಕೆಲ್ಲಾ ವಿಶಿಷ್ಟ ಕಾನೂನು, ಕ್ರಮಬದ್ಧ ಪದ್ಧತಿಗಳಿವೆ.  ಯಾವುದೇ ಠೇವಣಿದಾರನು ತನ್ನ ಎಲ್ಲ ಠೇವಣಿ ಸೇರಿದಂತೆ ವರ್ಷಕ್ಕೆ ರೂ.5000ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆದಿದ್ದಲ್ಲಿ ಅದಕ್ಕೆ ಆದಾಯ ತೆರಿಗೆ ಕಾಯಿದೆಯ ಅನ್ವಯ ಶೇಕಡ 10.20% ರಷ್ಟು ತೆರಿಗೆಯನ್ನು ಮೂಲದಲ್ಲೇ ಮುರಿದುಕೊಂಡು ಕೊಡುವುದು ಕಡ್ಡಾಯ ವಾಗಿದೆ.  ನಮೂನೆ 15ಹೆಚ್‍ನ್ನು ತುಂಬಿ, ಸಹಿಮಾಡಿ ನೀಡಿದರೆ ಬ್ಯಾಂಕು ಈ ತೆರಿಗೆಯನ್ನು ಹಿಡಿದುಕೊಳ್ಳುವುದಿಲ್ಲ. 

	ಮಾಸಿಕ ಠೇವಣಿ. ಪಿಗ್ಮಿ ಠೇವಣಿ, ಸಂಚಿತ ಠೇವಣಿ, ಆವರ್ತಕ ಠೇವಣಿ ಈ ಎಲ್ಲ ಬಗೆಯ ಠೇವಣಿಗಳಿಗೂ ಒಂದೇ ಬಗೆಯ ನಿಯಮಗಳಿವೆ. ಬ್ಯಾಂಕರ್ಸ್  ಠೇವಣಿದಾರನಿಂದ ನಿಯತಕಾಲಿಕವಾಗಿ ನಿಶ್ಚಿತ ಮೊಬಲಗನ್ನು ಪಡೆಯುತ್ತ ಹೋಗುತ್ತಾನೆ. ನಿರ್ದಿಷ್ಟ ಅವಧಿಯ ಅನಂತರ ಗೊತ್ತಾದ ಮೊತ್ತವನ್ನು ಬಡ್ಡಿಯ ಸಹಿತ ಮರು ಪಾವತಿ ಮಾಡಲಾಗುತ್ತದೆ. ಪಿಗ್ಮಿ ಠೇವಣಿಯಲ್ಲಿ ಬ್ಯಾಂಕರ್ಸ್ ಒಂದು ವಿಶೇಷ ಸವಲತ್ತನ್ನು ಒದಗಿಸುತ್ತಾನೆ. ತಾನೇ ಠೇವಣಿಗಳನ್ನು ಠೇವಣಿದಾರನಿಂದ ಸ್ವೀಕರಿಸುವ ವ್ಯವಸ್ಥೆ ಮಾಡುತ್ತಾನೆ. ಈ ಕೆಲಸಕ್ಕೆ ಕಮಿಷನ್ ಮೇಲೆ ಏಜೆಂಟರನ್ನು ನೇಮಿಸಿಕೊಂಡು ಅವರನ್ನು ಠೇವಣಿದಾರನ ಬಾಗಿಲಿಗೇ ಕಳಿಸುತ್ತಾನೆ.  ಈಗ ಇದು ರಿಸರ್ವ್ ಬ್ಯಾಂಕಿನಿಂದ ರದ್ದಾಗಿದೆ. 
ನಿವೃತ್ತಿ ಯೋಜನೆ ಠೇವಣಿಗಳು:(ರಿಟೈರ್‍ಮೆಂಟ್ ಇನ್ವೆಸ್ಟ್‍ಮೆಂಟ್ ಪ್ಲಾನ್):  ಈ ಯೋಜನೆಯಲ್ಲಿ ಠೇವಣಿದಾರ 10 ಇಲ್ಲವೇ 15 ವರ್ಷಗಳವರೆಗೆ ಪ್ರತಿ ತಿಂಗಳೂ ಒಂದು ನಿರ್ದಿಷ್ಟ ಮೊಬಲಗನ್ನು ಠೇವಣಿಯಿರಿಸುತ್ತಾ ಹೋಗುತ್ತಾನೆ. ಅವಧಿಯಕೊನೆಗೆ ಬ್ಯಾಂಕರ್ಸ್  ಠೇವಣಿದಾರನಿಗೆ ಬಡ್ಡಿಯ ಸಹಿತ ಈ ಮೊಬಲಗನ್ನು ಮರುಪಾವತಿ ಮಾಡುತ್ತಾನೆ. ಮರುಪಾವತಿಯನ್ನು ಪ್ರತಿತಿಂಗಳೂ ನಿರ್ದಿಷ್ಟ ಅವಧಿ ಪೂರೈಸುವವರೆಗೆ ಪಡೆಯಬಹುದು.

	ಈ ಯೋಜನೆಯ ಜೊತೆಗೆ ಠೇವಣಿದಾರನ ಜೀವವಿಮೆಯನ್ನೂ ಸೇರಿಸುವ ಮತ್ತೊಂದು ಯೋಜನೆ ಇದೆ. ಅದರ ಪ್ರಕಾರ ಠೇವಣಿದಾರ ನಿಗದಿಯಾದ ಅವಧಿಯೊಳಗೇ ತೀರಿಕೊಂಡರೆ ಅವನ ವಾರಸುದಾರರು ವಿಮೆಯ ಮೊಬಲಗನ್ನು ಪಡೆಯುತ್ತಾನೆ.

	ಅದೇ ತಾನೆ ನಿವೃತ್ತರಾದವರಿಗೆ ಅಥವಾ ಒಮ್ಮೆಗೇ ಒಂದು ದೊಡ್ಡ ಮೊಬಲಗನ್ನು ಪಡೆದವರಿಗೆ ಸೂಕ್ತವಾಗುವಂತೆ  ಇನ್ನೊಂದು ಯೋಜನೆ ಇದೆ. ಒಂದು ಮೊಬಲಗನ್ನು ಠೇವಣಿದಾರ ನಿಶ್ಚಿತ ಅವಧಿಯವರೆಗೆ ಇಡುವುದಾದರೆ ಬ್ಯಾಂಕು ಪ್ರಿತಿತಿಂಗಳೂ ಅದರ ಮೇಲಿನ ಬಡ್ಡಿಯನ್ನು ಪಾವತಿ ಮಾಡುತ್ತ ಹೋಗುತ್ತದೆ. ಅವಧಿಯ ಕೊನೆಗೆ ಬ್ಯಾಂಕು ಠೇವಣಿಯ ಮೊಬಲಗನ್ನು ಹಿಂದಿರುಗಿಸುತ್ತದೆ.

	ಬೇಡಿಕೆ ಠೇವಣಿ: ಚಾಲ್ತಿ ಠೇವಣಿ: ಚಾಲ್ತಿಖಾತೆಯಲ್ಲಿ ಹಣವನ್ನು ಜಮಾ ಮಾಡಿದರೆ ಠೇವಣಿದಾರ ತನಗಿಷ್ಟಬಂದಾಗ ಠೇವಣಿಯನ್ನು ಹಿಂದಕ್ಕೆ ಪಡೆಯಬಹುದು. ಸಾಮಾನ್ಯವಾಗಿ ಬ್ಯಾಂಕರು ಚಾಲ್ತಿ ಠೇವಣಿಯ ಮೇಲೆ ಬಡ್ಡಿ ನೀಡುವುದಿಲ್ಲ, ಅಷ್ಟೆ. ಖಾತೆಯಲ್ಲಿ ಠೇವಣಿದಾರ ಹೆಚ್ಚಿನ ಕನಿಷ್ಠ ಸಿಲ್ಕನ್ನು ಉಳಿಸಿರಬೇಕೆಂದು ಬ್ಯಾಂಕರ್ಸ್  ವಿಧಿಸುವುದುಂಟು. ಖಾತೆಯನ್ನು ಮುಚ್ಚುವಾಗಷ್ಟೇ ಈ ಕನಿಷ್ಠ ಶಿಲ್ಕನ್ನು ಹಿಂದಕ್ಕೆ ಪಡೆಯಬಹುದು. ಚಾಲ್ತಿ ಖಾತೆಯನ್ನು ತೆರೆದವರಿಗೆ ಬ್ಯಾಂಕರ್ಸ್  ಅನೇಕ ಸೇವೆಗಳನ್ನು ಸಲ್ಲಿಸುತ್ತಾನೆ. ಸವಲತ್ತುಗಳನ್ನು ಒದಗಿಸುತ್ತಾನೆ. ಈ ಸಲುವಾಗಿ ಅವನು ಠೇವಣಿದಾರನಿಂದ ಪ್ರಾಸಂಗಿಕ ಖರ್ಚುಗಳನ್ನು ಹಾಗು ಸೇವ ಶುಲ್ಕವನ್ನು ವಸೂಲು ಮಾಡುತ್ತಾನೆ.

	ಬಡ್ಡಿಯಿಲ್ಲದಿದ್ದರೂ ಚಾಲ್ತಿ ಖಾತೆಯಲ್ಲಿ ಠೇವಣಿಯಿಡಲು ಜನರು ಮುಂದಾಗಲು ಅನೇಕ ಕಾರಣಗಳುಂಟು. ಇತರ ಬಗೆಯ ಠೇವಣಿದಾರರಿಗಿಲ್ಲದ ಅನೇಕ ಸೇವಾ ಸೌಲಭ್ಯಗಳನ್ನು ಬ್ಯಾಂಕರ್ಸ್  ಠೇವಣಿದಾರನಿಗೆ ಒದಗಿಸುತ್ತಾನೆ. ಠೇವಣಿದಾರ ಅನಿರ್ಬಂಧಿತವಾಗಿ ಚೆಕ್ಕುಗಳನ್ನು ನೀಡಬಹುದು. ಚೆಕ್ಕುಗಳ ಹಣವನ್ನು ತರಿಸಿ ಕೊಡುವ ಕೆಲಸವನ್ನು ಬ್ಯಾಂಕರನಿಂದ ಮಾಡಿಸಬಹುದು. ಮೀರೆಳೆತ (ಓವರ್‍ಡ್ರಾಫ್ಟ್) ಸೌಲಭ್ಯಪಡೆಯಬಹುದು. ಇಂಥ ಅನೇಕ ಸೇವೆಗಳು ಚಾಲ್ತಿ ಠೇವಣಿದಾರನಿಗೆ ಒದಗುತ್ತವೆ.

	ಕರೆ ಠೇವಣಿ: ಸಾಮಾನ್ಯವಾಗಿ ಒಂದು ಬ್ಯಾಂಕು ಇನ್ನೊಂದರಲ್ಲಿ ಇಡುವ ಠೇವಣಿ. ಕರೆ ಠೇವಣಿಯ ಮೇಲಿನ ಬಡ್ಡಿಯ ದರ ಸಂದರ್ಭಾನುಸಾರ ನಿಗದಿಗೊಳ್ಳುತ್ತದೆ. ಬ್ಯಾಂಕುಗಳು ಸಾರ್ವಜನಿಕರಿಂದ ಪಡೆದ ಕರೆ ಠೇವಣಿಗಳ ಮೇಲೆ ಬಡ್ಡಿ ನೀಡಬಾರದೆಂದು ವಿಧಿಸಿದೆ. ಈ ಕಾರಣದಿಂದಾಗಿ ಇಂಥ ಠೇವಣಿಗಳಲ್ಲಿ ಸಾರ್ವಜನಿಕರಿಗೆ ಆಸಕ್ತಿಯಿಲ್ಲ. ಆದ್ದರಿಂದ ಕರೆ ಠೇವಣಿದಾರರು ಬಹುತೇಕ ಬ್ಯಾಂಕುಗಳೇ ಆಗಿರುತ್ತವೆ.  ಯಾವ ಪೂರ್ವಸೂಚನೆಯೂ ಇಲ್ಲದೆ ಠೇವಣಿದಾರ ಬ್ಯಾಂಕು ಠೇವಣಿಯನ್ನು ಹಿಂದಕ್ಕೆ ಪಡೆಯಬಹುದು. ಇದೇ ರೀತಿ ಕರೆ ಠೇವಣಿ ಸ್ವೀಕರಿಸಿದ ಬ್ಯಾಂಕು ಕರೆ ಠೇವಣಿಯನ್ನು ಯಾವ ಮುನ್ಸೂಚನೆಯೂ ಇಲ್ಲದೆ ಮರುಪಾವತಿ ಮಾಡಬಹುದು.

	ಉಳಿತಾಯ ಠೇವಣಿ: ಈ ಬಗೆಯ ಠೇವಣಿಗಳು ಬೇಡಿಕೆ ಠೇವಣಿಗಳಿಗೂ ನಿಶ್ಚಿತಾವಧಿ ಠೇವಣಿಗಳಿಗೂ ನಡುವಿನ ಬಗೆಯವು. ಹಿಂದೆ ಉಳಿತಾಯ ಠೇವಣಿ ಸ್ವೀಕರಿಸಲು ಪ್ರತ್ಯೇಕ ನ್ಯಾಸ ಸಂಸ್ಥೆಗಳೇ ಇದ್ದುವು. ಅನಂತರ ಅಂಚೆಕಛೇರಿಗಳು ಈ ಕಾರ್ಯವನ್ನು ಹಮ್ಮಿಕೊಂಡವು. ಬ್ಯಾಂಕುಗಳು ಈ ಲಾಭದಾಯಕ ವ್ಯವಹಾರವನ್ನು ಕೈಗೊಳ್ಳಲು ಬಹುಕಾಲ ಬೇಕಾಗಲಿಲ್ಲ. ಬ್ಯಾಂಕುಗಳ ಆಶ್ರಯದಲ್ಲಿ ಉಳಿತಾಯ ಠೇವಣಿಗಳು ತೀವ್ರಸ್ವರೂಪದ ಬದಲಾವಣೆ ಹೊಂದುತ್ತ ಚಾಲ್ತಿ ಠೇವಣಿಗಳಿಗೆ ಹತ್ತಿರವಾಗುತ್ತಿವೆ.

	ಉಳಿತಾಯ ಠೇವಣಿಯನ್ನು ಚೆಕ್ಕಿನ ಮೂಲಕ ಹಿಂದಕ್ಕೆ ಪಡೆಯುವ ಸವಲತ್ತನ್ನು ನೀಡಲಾಗುತ್ತದಾರೂ ಬರೆಯಹುದಾದ ಚೆಕ್ಕುಗಳ ಸಂಖ್ಯೆಯ ಮೇಲೆ ಮತ್ತು ಒಂದು ಚೆಕ್ಕಿನಲ್ಲಿ ಹಿಂದಕ್ಕೆ  ಪಡೆಯಬಹುದಾದ ಮೊಬಲಗಿನ ಮೇಲೆ ಮಿತಿ ಇರುತ್ತದೆ.

ಉಳಿತಾಯ ಠೇವಣಿಯ ಮೇಲೆ ಬಡ್ಡಿ ನೀಡುವಾಗ ತಿಂಗಳ ಕನಿಷ್ಠ ಶಿಲ್ಕನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಈ ಶಿಸಿಲ್ಕಿನ ಮೇಲಿನ ಬಡ್ಡಿಯನ್ನು ಇಡೀ ತಿಂಗಳಿಗೆ ನೀಡಲಾಗುತ್ತದೆ. ವ್ಯಾಪಾರಿ ಸಂಸ್ಥೆಗಳ ಹೆಸರಿನಲ್ಲಿ ಇಡಲಾದ ಉಳಿತಾಯ ಠೇವಣಿಯ ಮೇಲೆ ಬ್ಯಾಂಕುಗಳು ಬಡ್ಡಿ ನೀಡುವುದನ್ನು ಭಾರತದ ರಿಸರ್ವ್ ಬ್ಯಾಂಕು ನಿಷೇಧಿಸಿದೆ. ಬ್ಯಾಂಕರ್ಸ್  ಉಳಿತಾಯ ಠೇವಣಿ ಖಾತೆ ತೆರೆದವರಿಗೆ ಚೆಕ್ಕುಗಳನ್ನು ವಸೂಲು ಮಾಡಿಕೊಡುವನಾದರೂ ಮೂರನೆಯ ಕಕ್ಷಿಯ ಚೆಕ್ಕುಗಳನ್ನು ವಸೂಲು ಮಾಡಿಕೊಡುವುದಿಲ್ಲ. 			

		(ಡಿ.ಎನ್.ಎಸ್.ಎಂ.)
(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ